ದೊಡ್ಡ ಕಂಪೆನಿಗಳ ಸಿಂಹಸ್ವಪ್ನವಾಗಿರುವ AI ತಿಮಿಂಗಲ "ಕ್ಲಾಡ್ ಮೈಥಾಸ್" ಏನಿದು ಕ್ಲಾಡ್ ಮೈಥಾಸ್? ಬನ್ನಿ ನೋಡೋಣ.
ಕ್ಲಾಡ್ ಮೈಥಾಸ್ ಆಂಥ್ರೋಪಿಕ್ ಕಂಪೆನಿ ಅಭಿವೃದ್ಧಿಪಡಿಸಿರುವ AIನ ಒಂದು ಹೊಸ ಮಾದರಿ (AI Model). ಇದು ಮುಖ್ಯವಾಗಿ ಸೈಬರ್ ಭದ್ರತೆಯ (cyber security) ಕೆಲಸಗಳಾದ ಸಾಫ್ಟ್‌ವೇರ್‌ನಲ್ಲಿ ಇರುವಂತಹ ದುರ್ಬಲತೆಗಳನ್ನು (vulnerabilities) ಮತ್ತು ದೋಷಗಳನ್ನು (bugs) ಪತ್ತೆಹಚ್ಚಿ ಅವುಗಳನ್ನು ಸರಿಪಡಿಸಲು ನೆರವಾಗುವ ನೈಪುಣ್ಯತೆಯನ್ನು ಹೊಂದಿದೆ.
ಇದು ಅತ್ಯಂತ ಶಕ್ತಿಶಾಲಿಯಾದ AI ಮಾದರಿಯಾಗಿದ್ದು, ಸ್ವಯಂಚಾಲಿತವಾಗಿ (Automatically) ಸೈಬರ್ ದಾಳಿಗಳನ್ನು ಮಾಡುವ ಸಾಮರ್ಥ್ಯವನ್ನು ಹೊಂದಿದೆ.
ಇದರ ಪರೀಕ್ಷಾ ಹಂತದಲ್ಲಿ (sandbox testing) ಕಂಡುಬಂದ ಮುಖ್ಯಾಂಶಗಳು:
- ಇದು ಆಪರೇಟಿಂಗ್ ಸಿಸ್ಟಮ್ಸ್‌ಗಳಲ್ಲಿನ (Operating System) ಮತ್ತು ಬ್ರೌಸರ್‌ಗಳಲ್ಲಿನ ಸಾವಿರಾರು ಶೂನ್ಯ ದಿನದ ದುರ್ಬಲತೆಗಳನ್ನು (zero day vulnerability) ಸಂಶೋಧಕರ ನಿರ್ದೇಶನವಿಲ್ಲದೆಯೇ ಸ್ವತಂತ್ರವಾಗಿ ಕಂಡು ಹಿಡಿದಿದೆ.
- ಅತ್ಯಂತ ಸುರಕ್ಷಿತವೆಂದು ಪರಿಗಣಿಸಲ್ಪಡುವ OpenBSD ಆಪರೇಟಿಂಗ್ ಸಿಸ್ಟಮ್‌ನಲ್ಲಿದ್ದ 27 ವರ್ಷದ ಹಳೆಯ ದೋಷವನ್ನು ಪತ್ತೆಹಚ್ಚಿದೆ.
- ಸಂಶೋಧಕರು ಪರೀಕ್ಷಾ ವಾತಾವರಣವನ್ನು ಬೇಧಿಸಲು ನಿರ್ದೇಶಿಸಿದಾಗ, ಅದನ್ನು ಬೇಧಿಸಿ ಅಂತರ್ಜಾಲದ (internet) ಸಂಪರ್ಕವನ್ನು ಹೊಂದಿ, ಸಂಶೋಧಕರಿಗೆ ಇ-ಮೇಲ್ (Email) ಕಳುಹಿಸಿದೆ.
- ಸಂಶೋಧಕರು ಇದನ್ನು ಪರೀಕ್ಷಿಸುತ್ತಿದ್ದಾರೆ ಎಂದು ತಿಳಿದು, ಕೆಲವು ಪರೀಕ್ಷೆಗಳಲ್ಲಿ ತನ್ನ ಕ್ರಿಯೆಗಳನ್ನು ಮರೆಮಾಡುವ ಅಥವಾ ಮೌಲ್ಯಮಾಪನದ ಫಲಿತಾಂಶಗಳ ಮೇಲೆ ಪ್ರಭಾವ ಬೀರುವ ಲಕ್ಷಣಗಳನ್ನು ತೋರಿಸಿದೆ.
ನೋಡಿದ್ರಾ ಇದರ ಚಾಣಾಕ್ಷತನವನ್ನು? ಇದು ಏನಾದ್ರೂ ಹ್ಯಾಕರ್‌ಗಳಿಗೆ ಸಿಕ್ಕರೆ ಏನಾಗುತ್ತೆ? ಇರುವೆಗಳಿಗೆ ಬೆಲ್ಲದ ಉಂಡೆ ಸಿಕ್ಕಂತೆ. ಅಲ್ಲವೇ? 😄
ಈ ಎಲ್ಲಾ ಕಾರಣಗಳಿಂದ, ಆಂಥ್ರೋಪಿಕ್ ಸಂಸ್ಥೆಯು, ಕ್ಲಾಡ್ ಮೈಥಾಸ್ ಮಾದರಿಯನ್ನು ಸಾರ್ವಜನಿಕ ವಲಯದಲ್ಲಿ ಬಿಡುಗಡೆ ಮಾಡದೆ, ಪ್ರಾಜೆಕ್ಟ್ ಗ್ಲಾಸ್ ವಿಂಗ್ (Project Glasswing) ಎಂಬ ರಕ್ಷಣಾತ್ಮಕ (Secure) ಕಾರ್ಯಕ್ರಮದ ಮೂಲಕ Apple, Microsoft, AWS, Google ಮುಂತಾದ ಕಂಪನಿಗಳಿಗೆ ಈ AI ಮಾದರಿಯನ್ನು ಉಪಯೋಗಿಸಿಕೊಂಡು, ತಾವು ಅಭಿವೃದ್ಧಿಪಡಿಸಿರುವ ಅತ್ಯಂತ ಗಂಭೀರವಾದ (critical) ಸಾಫ್ಟ್‌ವೇರ್‌ಗಳ ದೋಷಗಳನ್ನು ಕಂಡುಹಿಡಿದು ಅವುಗಳನ್ನು ಸರಿಪಡಿಸಿಕೊಳ್ಳಲು ಅವಕಾಶ ನೀಡಿದೆ.
ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ಸಹ ತನ್ನ ಹವಾ ಸೃಷ್ಟಿಸಿದೆ. ಇತ್ತೀಚೆಗೆ ಭಾರತದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರವರು, ಮಾಹಿತಿ ತಂತ್ರಜ್ಞಾನದ ಸಚಿವರಾದ ಅಶ್ವಿನಿ ವೈಶ್ಣವ್ ರವರ ಜೊತೆ ಸೇರಿ ದೊಡ್ಡ ಬ್ಯಾಂಕ್‌ಗಳ ಮುಖ್ಯ ಅಧಿಕಾರಿಗಳೊಂದಿಗೆ ಮತ್ತು ಮಾಹಿತಿ ತಂತ್ರಜ್ಞಾನದ ಅಧಿಕಾರಿಗಳೊಂದಿಗೆ ಸೇರಿ ತುರ್ತು ಸಭೆ ಮಾಡಿ ಈ AI ಮಾದರಿಯಿಂದ ಆಗಬಹುದಾದ ಸೈಬರ್ ದಾಳಿಗಳನ್ನು ಅವಲೋಕಿಸಿ, ಕಟ್ಟೆಚ್ಚರ ವಹಿಸುವಂತೆ ಸೂಚಿಸಿದರು.
ಕ್ಲಾಡ್ ಮೈಥಾಸ್‌ಗೆ ಭೂತಕಾಲದಲ್ಲಿ ಯಾವುದೇ ಇತಿಹಾಸವಿಲ್ಲದಿದ್ದರೂ, ಭವಿಷ್ಯದ ಸೈಬರ್ ಭದ್ರತಾ ಜಗತ್ತಿನಲ್ಲಿ ತನ್ನ ಛಾಪು ಮೂಡಿಸುವ ಸಾಮರ್ಥ್ಯವಿದೆ ಎಂಬುದರಲ್ಲಿ ಸಂಶಯವೇ ಇಲ್ಲ.
- ರಾಜೇಶ್ ಕೆಳದಿಮಠ
ಹೆಚ್ಚಿನ ಮಾಹಿತಿಗಾಗಿ:

Comments
Post a Comment